Federalism

ವಿಶ್ಲೇಷಣೆ: ಲಯ ತಪ್ಪಬಹುದು ‘ಒಂದು ರಾಷ್ಟ್ರ’ ಮಂತ್ರ

Praveen Chakravarty
September 13, 2022

ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವವರು ಕಳೆದ ಕೆಲವು ವರ್ಷಗಳಿಂದ ‘ಒಂದು ರಾಷ್ಟ್ರ’ ಎಂಬ ಭಜನೆ ಮಾಡುತ್ತಿದ್ದಾರೆ. ಒಂದು ರಾಷ್ಟ್ರ, ಒಂದು ಅಸ್ಮಿತೆ; ಒಂದು ರಾಷ್ಟ್ರ, ಒಂದು ಚುನಾವಣೆ; ಒಂದು ರಾಷ್ಟ್ರ, ಒಂದು ಭಾಷೆ; ಒಂದು ರಾಷ್ಟ್ರ, ಒಂದು ಪರೀಕ್ಷೆ; ಒಂದು ರಾಷ್ಟ್ರ, ಒಂದು ಪಠ್ಯಕ್ರಮ; ಒಂದು ರಾಷ್ಟ್ರ, ಒಂದು ತೆರಿಗೆ… ಈ ಬಗೆಯ ಮಾತುಗಳಿವೆ. ದೇಶವನ್ನು ಒಗ್ಗೂಡಿಸಲು, ಬಲಪಡಿಸಲು ಈ ಬಗೆಯ ‘ಒಂದಾಗುವಿಕೆ’ ಬೇಕು ಎಂದು ಅವರು ಹೇಳುತ್ತಿದ್ದಾರೆ. ಇಡೀ ದೇಶಕ್ಕೆ ಅನ್ವಯವಾಗುವ ಒಂದೇ ಬಗೆಯ ನೀತಿಗಳನ್ನು ಕೇಂದ್ರವು ಜಾರಿಗೊಳಿಸಬೇಕು ಎನ್ನುತ್ತಿದ್ದಾರೆ.

ದೇಶದ ಧಾರ್ಮಿಕ, ಭಾಷಿಕ, ಸಾಂಸ್ಕೃತಿಕ ಭಿನ್ನತೆಗಳು ಬಹುಶ್ರುತ. ಆದರೆ, ದೇಶದ ಆರ್ಥಿಕ, ರಾಜಕೀಯ ಮತ್ತು ಜನಸಂಖ್ಯೆಗೆ ಸಂಬಂಧಿಸಿದ ಭಿನ್ನತೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ, ಪೂರ್ತಿಯಾಗಿ ಗುರುತಿಸಿಲ್ಲ. ಬಿಹಾರದ ವ್ಯಕ್ತಿಯು ವಾರ್ಷಿಕ ಸರಾಸರಿ ₹ 45 ಸಾವಿರ ಸಂಪಾದಿಸುತ್ತಾನೆ. ಕರ್ನಾಟಕದ ವ್ಯಕ್ತಿಯು ವಾರ್ಷಿಕ ಸರಾಸರಿ ಐದು ಪಟ್ಟು ಹೆಚ್ಚು, ಅಂದರೆ, ₹ 2.3 ಲಕ್ಷ ಸಂಪಾದಿಸುತ್ತಾನೆ. ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಅಧಿಕಾರ ಹಿಡಿಯುವ ಸ್ಪರ್ಧೆಯಲ್ಲಿ 23 ರಾಜಕೀಯ ಪಕ್ಷಗಳು ಇವೆ. ಉತ್ತರಪ್ರದೇಶದ ಜನಸಂಖ್ಯೆಯ ಸರಾಸರಿ ವಯಸ್ಸು 22 ವರ್ಷ, ಕರ್ನಾಟಕದಲ್ಲಿ ಇದು 31 ವರ್ಷ. ಬೇರೆ ಬೇರೆ ರಾಜ್ಯಗಳಲ್ಲಿ ಜನ ಬೇರೆ ಬೇರೆ ಭಾಷೆಗಳನ್ನು ಮಾತನಾಡುವುದು, ಬೇರೆ ಬೇರೆ ಆಹಾರ ಕ್ರಮ ಪಾಲಿಸುವುದು, ವಿಭಿನ್ನ ಹಬ್ಬಗಳನ್ನು ಆಚರಿಸುವುದಷ್ಟೇ ಅಲ್ಲದೆ, ಬೇರೆ ಬೇರೆ ರಾಜಕೀಯ ಪಕ್ಷಗಳಿಗೆ ಮತ ಚಲಾಯಿಸುತ್ತಾರೆ, ಅವರ ಸಂಪಾದನೆಯ ಮೊತ್ತ ಬೇರೆ ಬೇರೆ ಇದೆ.

ಭಾರತದಲ್ಲಿನ ಇಂತಹ ಎದ್ದುಕಾಣುವ ಭಿನ್ನತೆಗಳು ಹೆಮ್ಮೆಯ ವಿಚಾರವೂ ಹೌದು ನಾಚಿಕೆಯ ಸಂಗತಿಯೂ ಹೌದು. ನಾವು ನಮ್ಮ ಶ್ರೀಮಂತ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವೈವಿಧ್ಯದ ವಿಚಾರದಲ್ಲಿ ಹೆಮ್ಮೆ ಹೊಂದಿರಬೇಕು. ಆದರೆ, ಆರ್ಥಿಕ ಹಾಗೂ ಜನಸಂಖ್ಯೆಗೆ ಸಂಬಂಧಿಸಿದಂತೆ ರಾಜ್ಯಗಳ ನಡುವಿನ ಅಂತರವು ಅಪೇಕ್ಷಣೀಯವಲ್ಲ. ಅದು ವಿನಾಶಕಾರಿ. ರಾಜ್ಯಗಳ ನಡುವಿನ ಆರ್ಥಿಕ ಕಂದಕವು ಸ್ವಾತಂತ್ರ್ಯಾನಂತರ ಬಹಳ ಹೆಚ್ಚಾಗಿದೆ. ಈಗ ಅದು ಗಂಭೀರ ಪರಿಣಾಮ ಉಂಟುಮಾಡಬಲ್ಲ ವಿಭಜನಕಾರಿ ವಿಷಯವಾಗುವ ಅಪಾಯ ಇದೆ.

ಬೇರೆ ಬೇರೆ ರಾಜ್ಯಗಳ ನಡುವಿನ ಜೀವನೋಪಾಯದ ಅಂತರವನ್ನು ತಗ್ಗಿಸುವ ಅನಿವಾರ್ಯ ಇದೆ. ಇದು ಆಗಬೇಕಾದರೆ ‘ಒಂದು ದೇಶ, ಹಲವು ಕ್ರಮಗಳು’ ಎಂಬ ಧೋರಣೆ ಬೇಕು. ಅಂದರೆ, ಬೇರೆ ಬೇರೆ ರಾಜ್ಯಗಳಿಗೆ ಸ್ಥಳೀಯವಾದ ಕ್ರಮಗಳು ಬೇಕು. ಊಳಿಗಮಾನ್ಯ ಮನಸ್ಸಿನಿಂದ, ದೆಹಲಿಯಿಂದ ‘ಏಕತ್ವ’ವನ್ನು ಹೇರುವುದು ತಿರುಗುಬಾಣ ಆದೀತು. ಇದು ಪ್ರತ್ಯೇಕತಾವಾದಿ ಆಲೋಚನೆಗಳನ್ನು ಬಿತ್ತಬಹುದು, ರಾಷ್ಟ್ರವಿರೋಧಿಯಾಗಿ ಪರಿಣಮಿಸಬಹುದು.

ದೇಶದ ಬೇರೆ ಬೇರೆ ರಾಜ್ಯಗಳ ನಡುವಿನ ಆರ್ಥಿಕ ಅಸಮಾನತೆಯನ್ನು ನಾವು ಅರ್ಥ ಮಾಡಿಕೊಳ್ಳೋಣ. ದೇಶದ ಅಷ್ಟೂ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೈಕಿ ಐದು ಮುಂಚೂಣಿ ರಾಜ್ಯಗಳಲ್ಲಿ – ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಗುಜರಾತ್ ಮತ್ತು ಕೇರಳ – ನಡೆಯುವ ಆರ್ಥಿಕ ಚಟುವಟಿಕೆಗಳ ಪ್ರಮಾಣವು ಇನ್ನುಳಿದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುವ ಆರ್ಥಿಕ
ಚಟುವಟಿಕೆಗಳಿಗೆ ಸಮ. ಈ ಐದು ರಾಜ್ಯಗಳಲ್ಲಿನ ಆರ್ಥಿಕ ಚಟುವಟಿಕೆಗಳು ಇಡೀ ದೇಶದ ಅರ್ಧದಷ್ಟು ಆರ್ಥಿಕ ಚಟುವಟಿಕೆಗಳಿಗೆ ಸಮ. ಅಮೆರಿಕ ಮತ್ತು ಚೀನಾದಲ್ಲಿನ ಮುಂಚೂಣಿ ಐದು ರಾಜ್ಯಗಳು ಅಲ್ಲಿನ ಒಟ್ಟು ಆರ್ಥಿಕ ಚಟುವಟಿಕೆಗಳ ಮೂರನೆಯ ಒಂದರಷ್ಟು ಪಾಲನ್ನು ಮಾತ್ರ ಹೊಂದಿವೆ. ಅಂದರೆ, ಭಾರತದಲ್ಲಿನ ಆರ್ಥಿಕ ಚಟುವಟಿಕೆಗಳು ಅಮೆರಿಕ ಹಾಗೂ ಚೀನಾದಲ್ಲಿನ ಆರ್ಥಿಕ ಚಟುವಟಿಕೆಗಳಿಗಿಂತಲೂ ಒಂದೇ ಕಡೆ ಹೆಚ್ಚು ಸಾಂದ್ರೀಕೃತ ಆಗಿವೆ.

ಭಾರತದ ಆರ್ಥಿಕ ಚಟುವಟಿಕೆಗಳು ಕೆಲವೇ ರಾಜ್ಯಗಳಲ್ಲಿ ಕೇಂದ್ರೀಕೃತ ಆಗಿರುವ ಕಾರಣ,
ಕೇಂದ್ರ ಸರ್ಕಾರದ ತೆರಿಗೆ ವರಮಾನಕ್ಕೆ ಈ ರಾಜ್ಯಗಳೇ ಹೆಚ್ಚಿನ ಕೊಡುಗೆ ನೀಡುತ್ತಿವೆ. ಮಹಾರಾಷ್ಟ್ರ, ಕರ್ನಾಟಕ ಅಥವಾ ಹರಿಯಾಣದ ವ್ಯಕ್ತಿ ಕೇಂದ್ರಕ್ಕೆ ತೆರಿಗೆ ರೂಪದಲ್ಲಿ ವಾರ್ಷಿಕ ಸರಾಸರಿ ₹ 20 ಸಾವಿರ ಪಾವತಿಸುತ್ತಾನೆ. ಆದರೆ, ಬಿಹಾರದ ವ್ಯಕ್ತಿ ಸರಾಸರಿ ₹ 2,000 ಮಾತ್ರ ನೀಡುತ್ತಾನೆ. ಉತ್ತರಪ್ರದೇಶ ಅಥವಾ ಮಧ್ಯ ಪ್ರದೇಶದ ವ್ಯಕ್ತಿ ಸರಾಸರಿ ₹ 4,500 ಕೊಡುತ್ತಾನೆ. ಅಂದರೆ, ಕರ್ನಾಟಕದ ವ್ಯಕ್ತಿಯು ಬಿಹಾರದ ವ್ಯಕ್ತಿಗಿಂತ ಹತ್ತು ಪಟ್ಟು ಹೆಚ್ಚು ಹಣವನ್ನು ತೆರಿಗೆ ರೂಪದಲ್ಲಿ ನೀಡುತ್ತಾನೆ. ಈ ಅಂತರವು ವಿಶ್ವದಲ್ಲಿಯೇ ಅತಿ ಹೆಚ್ಚಿನದು. ಅಮೆರಿಕ ಮತ್ತು ಚೀನಾದ ಶ್ರೀಮಂತ ರಾಜ್ಯ ಅಥವಾ ಪ್ರಾಂತ್ಯದ ವ್ಯಕ್ತಿ ಕೊಡುವ ಸರಾಸರಿ ತೆರಿಗೆ ಮೊತ್ತವು ಬಡ ರಾಜ್ಯದ ವ್ಯಕ್ತಿ ಕೊಡುವ ಸರಾಸರಿ ಮೊತ್ತಕ್ಕಿಂತ ಮೂರು ಪಟ್ಟು ಮಾತ್ರ ಹೆಚ್ಚು.

ಈ ತೆರಿಗೆಯನ್ನು ಸಂಗ್ರಹಿಸುವ ಕೇಂದ್ರ ಸರ್ಕಾರವು ಅದರಲ್ಲಿ ಒಂದಿಷ್ಟನ್ನು ರಾಜ್ಯಗಳಿಗೆ ಕೆಲವು ಯೋಜನೆಗಳಿಗೆ ಹಾಗೂ ಇತರ ವೆಚ್ಚಗಳಿಗೆ ಮರುಹಂಚಿಕೆ ಮಾಡುತ್ತದೆ. ಈ ಕೆಲಸ ಬೇರೆ ದೇಶಗಳಲ್ಲಿಯೂ ನಡೆಯುತ್ತದೆ. ಇದು ಶ್ರೀಮಂತ ಹಾಗೂ ಬಡ ರಾಜ್ಯಗಳ ನಡುವಿನ ಅಂತರವನ್ನು ತಗ್ಗಿಸುವ ಒಂದು ಯತ್ನ. ಕೇಂದ್ರಕ್ಕೆ ನೀಡುವ ₹ 100 ತೆರಿಗೆಗೆ ಪ್ರತಿಯಾಗಿ ಬಿಹಾರದ ವ್ಯಕ್ತಿಗೆ ಸರಾಸರಿ ₹ 600 ಸಿಗುತ್ತದೆ. ಕರ್ನಾಟಕದ ವ್ಯಕ್ತಿಗೆ ಸರಾಸರಿ ₹ 50 ಮಾತ್ರ ಸಿಗುತ್ತದೆ.

ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಗುಜರಾತ್ ಮತ್ತು ಹರಿಯಾಣದ ನಿವಾಸಿಗಳು ಕೇಂದ್ರದ ತೆರಿಗೆ ವರಮಾನಕ್ಕೆ ಕೊಡುವ ಹಣವು, ಅವರು ಅಲ್ಲಿಂದ ಪಡೆಯುವ ಹಣಕ್ಕಿಂತ ಹೆಚ್ಚು. ಇತರ ಎಲ್ಲ ರಾಜ್ಯಗಳ ನಿವಾಸಿಗಳು ಕೇಂದ್ರದ ತೆರಿಗೆ ಸಂಗ್ರಹದಿಂದ ಪಡೆಯುವ ಹಣವು, ಅವರು ಕೊಡುವ ಹಣಕ್ಕಿಂತ ಹೆಚ್ಚು. ಹೀಗಾಗಿ, ಈ ಐದು ರಾಜ್ಯಗಳ ನಿವಾಸಿಗಳು ಮಾತ್ರ ದೇಶದ ಇತರ ಭಾಗಗಳ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ಶ್ರೀಮಂತ ಹಾಗೂ ಬಡ ರಾಜ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಇದು ಸರಿಯಾದ, ನ್ಯಾಯಬದ್ಧವಾದ ನೀತಿ ಹೌದು. ಆದರೆ, ಕಾಲ ಸರಿದಂತೆಲ್ಲ ಈ ಅಂತರವು ಹೆಚ್ಚುತ್ತ ಸಾಗಿದೆ; ಕಡಿಮೆ ಆಗಿಲ್ಲ. ಹೀಗಾಗಿ, ಈ ರಾಜ್ಯಗಳ ಜನ ಈಗ ದೇಶದ ಇತರ ಪ್ರದೇಶಗಳಿಗಾಗಿ ತಾವು ಇನ್ನೂ ಎಷ್ಟು ಕಾಲ ಕೊಡುತ್ತಿರಬೇಕು ಎಂದು ಪ್ರಶ್ನಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ‘ಒಂದು ರಾಷ್ಟ್ರ, ಒಂದು ನೀತಿ’ಯನ್ನು ಹೇರುವುದು ರಾಜ್ಯ
ಗಳಲ್ಲಿನ ಜನರನ್ನು ‍ಪ್ರಚೋದಿಸಬಹುದು, ದೇಶದ ಸೂಕ್ಷ್ಮ ಸಮತೋಲನಕ್ಕೆ ಬೆದರಿಕೆ ಒಡ್ಡುವ ಉಪ ರಾಷ್ಟ್ರೀಯವಾದದ ಅಲೆಗೆ ಕಾರಣವಾಗಬಹುದು.

ಉದಾಹರಣೆಗೆ, ಕರ್ನಾಟಕದಲ್ಲಿನ ಸರ್ಕಾರವು ಉಚಿತವಾಗಿ ಇಂಟರ್ನೆಟ್‌ ನೀಡುವುದಕ್ಕೆ ಅವಕಾಶ ಇಲ್ಲ ಎಂದು ಕೇಂದ್ರ ಸರ್ಕಾರ ತಾಕೀತು ಮಾಡಿದರೆ, ಕನ್ನಡಿಗರು ತಿರುಗಿನಿಂತು ತಾವು ನೀಡಿದ ತೆರಿಗೆ ಹಣದಿಂದ ಉತ್ತರಪ್ರದೇಶದಲ್ಲಿ ಉಚಿತವಾಗಿ ಸ್ಕೂಟರ್ ನೀಡುತ್ತಿರುವುದು ಏಕೆ ಎಂದು ಕೇಳಬಹುದು. ಕರ್ನಾಟಕದ ಯುವಕರು ನೀಟ್ ಪರೀಕ್ಷೆ ಬರೆಯುವಂತೆ, ಜಿಎಸ್‌ಟಿ ಪಾವತಿಸುವಂತೆ ಅವರ ಇಚ್ಛೆಗೆ ವಿರುದ್ಧವಾಗಿ ಒತ್ತಡ ತಂದರೆ, ಬಿಹಾರದ ರೈತರಿಗೆ ತಮ್ಮ ತೆರಿಗೆ ಹಣವನ್ನು ಏಕೆ ವೆಚ್ಚ ಮಾಡಬೇಕು ಎಂದು ಅವರು ಕೇಳಬಹುದು. ಇವೆಲ್ಲ ಬಹಳ ಅಪಾಯಕಾರಿ ಪ್ರಚೋದನೆಗಳಾಗಬಹುದು. ಇಂಥವನ್ನು ಹೇಗಾದರೂ ಮಾಡಿ ತಡೆಯಬೇಕು.

ಎಲ್ಲ ರಾಜ್ಯಗಳೂ ತಾವೆಲ್ಲ ಒಂದೇ ಎಂದು ವರ್ತಿಸುವಂತೆ ಮಾಡಿದರೆ, ಎಲ್ಲ ರಾಜ್ಯಗಳೂ ಒಂದೇ ನೀತಿಯನ್ನು ಅನುಸರಿಸುವಂತೆ ಮಾಡಿದರೆ ದೇಶವನ್ನು ಒಗ್ಗೂಡಿಸಿದಂತೆ, ಬಲಪಡಿಸಿದಂತೆ ಆಗುತ್ತದೆ ಎಂದು ಕೇಂದ್ರ ನಂಬಿರುವಂತಿದೆ. ಆದರೆ ಭಾರತದ ಬಹುತ್ವವನ್ನು ಗೌರವಿಸದೇ ಇದ್ದರೆ, ಬಹುತ್ವದ ಅಭಿವ್ಯಕ್ತಿಗೆ ಅವಕಾಶ ಕೊಡದೇ ಇದ್ದರೆ ಅದು ಬಹಳ ಬೇಗ ಅಶಾಂತಿಯಾಗಿ ಪರಿವರ್ತನೆ ಕಾಣಬಲ್ಲದು. ಮಹಾತ್ಮ ಗಾಂಧಿ ಅವರ ಆತ್ಮಸಾಕ್ಷಿಯಂತೆ ಇದ್ದ ಚಕ್ರವರ್ತಿ ರಾಜಗೋಪಾಲಾಚಾರಿ ಅವರು ಹೇಳಿದಂತೆ, ‘ಏಕತೆ ಅಂದರೆ ಏಕರೂಪತೆ ಅಲ್ಲ’.

ಲೇಖಕ: ರಾಜಕೀಯ ಅರ್ಥಶಾಸ್ತ್ರಜ್ಞ, ಕಾಂಗ್ರೆಸ್ಸಿನ ಪದಾಧಿಕಾರಿ

https://www.prajavani.net/op-ed/analysis/praveen-chakravarti-analysis-on-one-nation-bhajan-971512.html

Leave a Reply

Your email address will not be published. Required fields are marked *